girishkallihal.blogspot.com/ is a blog containing most important articles on national and state aspects and also Kannada poems. You will find resourceful blog contents which will help you to enrich your knowledge.

Wednesday, 23 December 2020

ರೈತನಿಗೇಕೆ ಹೆಣ್ಣು ಸಿಗುತ್ತಿಲ್ಲ?

"ಕೃಷಿಕನಿಗೆ ಹೆಣ್ಣು ಸಿಗುತ್ತಿಲ್ಲ'' ಎನ್ನುವುದು ಇಂದಿನ ಬಹುದೊಡ್ಡ ಸಮಸ್ಯೆ. ಹುಡುಗ ಯಾವುದೇ ಕೆಲಸ ಮಾಡುತ್ತಿರಲಿ, ಆದರೆ, ಕೃಷಿಕ ಮಾತ್ರ ಬೇಡ ಎನ್ನುವ ನಿವೇದನೆ ಈಗಿನ ಹೆಣ್ಣುಮಕ್ಕಳದ್ದು...

ಮದುವೆ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಾಣದ ಹೆಣ್ಣಿಲ್ಲ. ಏಳು ಮಲ್ಲಿಗೆಯ ತೂಕದ ತನ್ನನ್ನು ಕುದುರೆಯ ಮೇಲೆ ಹೊತ್ತೂಯ್ಯುವ ರಾಜಕುಮಾರ; ಅಂದದ ಕೈ ಹಿಡಿದು, ನಾಡಿ ಪರೀಕ್ಷಿಸುತ್ತಾ, ಕಣ್ಣಲ್ಲಿ ಕಚಗುಳಿ ಇಟ್ಟು ಮಾತಾಡುವ ಡಾಕ್ಟರೋ; ಎಲ್ಲೋ ಲ್ಯಾಪ್‌ಟಾಪ್‌ ಎದುರು ವೆಬ್‌ಕ್ಯಾಮ್‌ನಲ್ಲಿ ಪೋಸು ಕೊಟ್ಟು “ಹೆಲೋ’ ಎನ್ನುವ ಸಾಫ್ಟ್ವೇರ್‌ ಎಂಜಿನಿಯರೋ; ಲಕ್ಷುರಿ ಕಾರಿನ ಹಿಂಬದಿಯಲ್ಲಿ ತನ್ನೊಂದಿಗೆ ಕುಳಿತ ಉದ್ಯಮಿಯೋ... ಅವಳ ಮದುವೆಯ ಕನಸಿನಲ್ಲಿ ಪಾಲು ಪಡೆಯುವ ವರ ಮಹಾಶಯರು ಬಹುತೇಕರು ಇವರೇ. ಆದರೆ, ಯಾವ ಹೆಣ್ಣೂ ಹಳೇ ಸಿನಿಮಾದಂತೆ, ಹೊಲದಲ್ಲಿ ಕುಳಿತು, ಪತಿಗೆ ರಾಗಿಮುದ್ದೆ ತಿನ್ನಿಸುವ ಕನಸು ಕಾಣುವುದಿಲ್ಲ. ಅವಳ ಕನಸಿನಲ್ಲಿ ಯಾವತ್ತೂ ರೈತ ಬರುವುದೇ ಇಲ್ಲ.

  ಹೌದು, ಆ ರೈತ ಯೂನಿವರ್ಸಿಟಿಯ ಮೆಟ್ಟಿಲು ಹತ್ತಿದವನಲ್ಲ. ಫೇಸ್‌ಬುಕ್‌ನಲ್ಲಿ ಅವನು ಅಕೌಂಟನ್ನೇ ತೆರೆದಿಲ್ಲ. ಮಳೆ- ಬಿಸಿಲು- ಚಳಿಯಲ್ಲೇ ದುಡಿಯುವುದರಿಂದ ಅವನು ಗ್ಲ್ಯಾಮರ್‌ ಆಗಿ ಕಾಣಿಸುವುದೂ ಇಲ್ಲ. ಅವನಿಗೊಂದು ವೀಕ್ಲಿ ಆಫ್ ಇಲ್ಲ. ತಿಂಗಳಿಗೆ ಇಂತಿಷ್ಟು ಅಂತ ಸಂಬಳದ ಕಾಸು ಅವನ ಅಕೌಂಟಿಗೆ ಬಂದು ಬೀಳುವುದಿಲ್ಲ. ಅಮೇಜಾನ್‌ನಲ್ಲೋ- ಫ್ಲಿಪ್‌ಕಾರ್ಟ್‌ನಲ್ಲೋ ಶಾಪ್‌ ಮಾಡಿದರೆ, ವಸ್ತು ಅವನ ಹಳ್ಳಿಯ ಮನೆಗೆ ಬರುವುದೂ ಇಲ್ಲ!

''ರೈತನನ್ನು ನೀವೇಕೆ ಮದುವೆ ಆಗುವುದಿಲ್ಲ?'' ಅಂತ ಕೇಳಿದರೆ, ಇಂದಿನ ಯುವತಿಯರ ಉತ್ತರಗಳ ಸಾಲು ಹೀಗಿದ್ದೀತು.

“ಕೃಷಿಕನಿಗೆ ಹೆಣ್ಣು ಸಿಗುತ್ತಿಲ್ಲ’’ ಎನ್ನುವುದು ಇಂದಿನ ಬಹುದೊಡ್ಡ ಸಮಸ್ಯೆ. ಹುಡುಗ ಯಾವುದೇ ಕೆಲಸ ಮಾಡುತ್ತಿರಲಿ, ಆದರೆ, ಕೃಷಿಕ ಮಾತ್ರ ಬೇಡ ಎನ್ನುವ ನಿವೇದನೆ ಈಗಿನ ಹೆಣ್ಣುಮಕ್ಕಳದ್ದು.

  ಹಾಗೆ ನೋಡಿದರೆ, ಸಿಟಿ ಹುಡುಗರ ಸ್ಥಿತಿ, ಕೃಷಿಕನಿಗಿಂತ ಕಳಪೆ. ನೆಮ್ಮದಿಯಲ್ಲಿ ರೈತನ ಬದುಕೇ ಕೊಂಚ ಲೇಸು ಅಂತನ್ನಿಸುತ್ತೆ. ನಗರದ ಯುವಕರ ವೈವಾಹಿಕ ಸಮಸ್ಯೆಗಳು, ಕೃಷಿಕನಿಗಿಂತ ಹೊರತಾಗಿಯೂ ಇಲ್ಲ. ಆದರೂ, ಇಂದಿನ ಹುಡುಗಿ ರೈತನತ್ತ ತಿರುಗಿಯೂ ನೋಡುವುದಿಲ್ಲ.

  ಹೊಲವಿದ್ದ ಹಳ್ಳಿಯ ಯುವಕರು ಕಡೇಪಕ್ಷ, ಹೊಟ್ಟೆ ಹೊರೆಯಲು ಬೇರೆಯವರಲ್ಲಿ ಕೆಲಸಕ್ಕೆ ಹೋಗಬೇಕಿಲ್ಲ. ಆಸ್ತಿ ರೂಪದಲ್ಲಿ ಬಂದ ಹೊಲದಲ್ಲಿಯೇ ಸಾಂಪ್ರದಾಯಕ ಕೃಷಿ ಮಾಡಬಹುದು. ಒಂದು ಎಕರೆ ಹೊಲವಿದ್ದರೆ, ಅಲ್ಲಿಯೇ ಕೃಷಿ ಮಾಡಿಕೊಂಡು ನೆಮ್ಮದಿಯ ಬದುಕು ಕಾಣಬಹುದು. ಇಂಥ ರೈತರಿಗೆ ತೊಂದರೆಗಳೇ ಇಲ್ಲ ಎಂದು ಹೇಳುತ್ತಿಲ್ಲ. ಬೆಳೆ ನಷ್ಟ, ಸಾಲ ಬಾಧೆ... ಇತ್ಯಾದಿಗಳು ಕಾಡುತ್ತವೆ. ಆದರೆ, ಬೇರೆಯವರಡಿ ಆಳಾಗಿ ದುಡಿಯುವ ಹಂಗಿಲ್ಲ. ಪಟ್ಟಣದವರ ಸ್ಥಿತಿ ನೋಡಿ, ದುಡಿಯಲು ಸೂಕ್ತ ಕೆಲಸವೂ ಇಲ್ಲ, ಇನ್ನು ಕೆಲಸದಲ್ಲೇ ಬಂಗಾರದಂಥ ಜೀವನ ಮಾಡಿಕೊಳ್ಳುವುದಂತೂ ಅಸಾಧ್ಯವೇ ಸರಿ.

  ಪಟ್ಟಣದ ಕೆಲ ಯುವಕರು ಜಾಣರಿದ್ದು, ಸರ್ಕಾರಿ ಕೆಲಸ ಪಡೆದಿರುತ್ತಾರೆ. ಆದರೆ, ಹೆಣ್ಣು ಕೊಡುವಾಗ “ಸ್ವಲ್ಪ ಹೊಲ ಇದ್ದರ ಚೊಲೊ ಆಗತ್ತಿತ್ತ ನೋಡ್ರಿ, ಭೂಮಿ ಅಂದ್ರ ಜೀವಕ್ಕ ರಕ್ಷಣೆ ಇದ್ದಂಗ’ ಅಂದು ಹುಡುಗನನ್ನು ರಿಜೆಕ್ಟ್ ಮಾಡಿದ ಕನ್ಯಾಪಿತೃಗಳೂ ಇದ್ದಾರೆ. ಪಟ್ಟಣದ ಹುಡುಗರು ಜಾಣರಿರಬೇಕು, ಸರ್ಕಾರಿ ನೌಕರನಾಗಿರಬೇಕು, ಜೊತೆಗೆ ಭೂಮಿಯೂ ಇದ್ದರಷ್ಟೇ ಅವನಿಗೆ ಡಿಮ್ಯಾಂಡು.  ಆದರೆ, ಸಂಪೂರ್ಣವಾಗಿ ಆತ ಜಮೀನನ್ನೇ ನಂಬಿದ್ದಾನೆಂದರೆ, ಕನ್ಯಾಪಿತೃಗಳು ಅವನತ್ತ ದೃಷ್ಟಿ ನೆಡುವುದಿಲ್ಲ.

  ಶಿಕ್ಷಣವನ್ನು ಪಡೆದ ಯುವತಿ ಇಂದು ತನಗಿಂತ ಕಡಿಮೆ ಕಲಿತ ವ್ಯಕ್ತಿಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಬಿ.ಇ., ಡಾಕ್ಟರ್‌ ಇತ್ಯಾದಿ ಪದವಿಗಳನ್ನು ಪಡೆದ ಹೆಣ್ಣುಮಕ್ಕಳು ಕೃಷಿಕನೊಟ್ಟಿಗೆ ಸಂಸಾರ ಕಟ್ಟಿಕೊಳ್ಳುವ ಕನಸನ್ನೂ ಕಾಣುತ್ತಿಲ್ಲ. ಹಾಗಂತ ಕೃಷಿಕರಿಗೆ ಹೆಣ್ಣೇ ಸಿಗುತ್ತಿಲ್ಲ ಎನ್ನುವುದನ್ನು ಒಪ್ಪಲಾಗದು. ಅವರಿಗೆ ತಕ್ಕುದಾದ ಹುಡುಗಿಯರು ಇದ್ದೇ ಇರುತ್ತಾರೆ.

  ಆದರೆ, ಒಂದು ತಿಳಿದಿರಲಿ... ಹೆಣ್ಣನ್ನು ಕೃಷಿಕನಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಲು ಬೇರೆ ವೃತ್ತಿಯವನಿಗೆ ಸಾಧ್ಯವಿಲ್ಲ. ಇಪ್ಪತ್ನಾಲ್ಕು ಗಂಟೆಯೂ ಅವನ ಸಖ್ಯ, ಭೂಮಿಯೆಂಬ ತಾಯಿಯ ಜತೆಯೇ ಇರುತ್ತೆ. ಭೂಮಿಗೆ ಪೂಜಿಸಿ, ಆತ ಎಷ್ಟು ಗೌರವ- ಭಕ್ತಿ ತೋರುತ್ತಾನೋ, ಹೆಣ್ಣಿಗೂ ಅಂಥದ್ದೇ ಗೌರವವನ್ನು ನೀಡುತ್ತಾನೆ. ಅದಕ್ಕಾಗಿಯೇ ಕೃಷಿಕರಲ್ಲಿ ವಿಚ್ಛೇದನದಂಥ ಪ್ರಕರಣಗಳು ನಡೆಯುವುದಿಲ್ಲ. ಸಣ್ಣ ಸಣ್ಣ ಮುನಿಸು ಬೆಟ್ಟವಾಗಿ, ಜೀವನವೇ ಜಟಿಲವಾಗುವುದಿಲ್ಲ.

ಈ ಗುಟ್ಟನ್ನು ಹೆಣ್ಣು ಅರಿತರೆ, ಅವಳ ಕನಸಿನಲ್ಲಿ ರೈತನೂ ಬಂದಾನು!

ಸಿಟಿ ಹುಡುಗರಿಗೆ ಕೃಷಿಯತ್ತ ಒಲವು!
ಹೆಣ್ಣುಮಕ್ಕಳೆಲ್ಲ ಕೃಷಿಕನನ್ನು ಓರೆಗಣ್ಣಿನಿಂದ ನೋಡುತ್ತಿದ್ದರೆ, ನಗರದಲ್ಲಿ ಬೇರೆಯದ್ದೇ ಗಾಳಿ ಸುಳಿದಾಡುತ್ತಿದೆ. ಎಷ್ಟೋ ನವಯುವಕರು ಸಿಟಿಯಲ್ಲಿನ ಕಂಪನಿಗಳ ಕೆಲಸದ ಒತ್ತಡವನ್ನು ಸಹಿಸಲಾರದೆ, ಕೃಷಿಯೆಡೆಗೆ ಒಲವು ತೋರುತ್ತಿರುವುದು ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತೆ. ಇಂಥ ವಿದ್ಯಾವಂತ ಯುವಕರು ಕೃಷಿಯನ್ನು ಉದ್ಯೋಗವನ್ನಾಗಿ ಆಯ್ಕೆಮಾಡಿದರೆ, ಹೆಣ್ಣಿಗೇನೂ ಬರವಿಲ್ಲ. ಎಷ್ಟೋ ವಿದ್ಯಾವಂತ ಹುಡುಗಿಯರು, ಶ್ರೀಮಂತನಿದ್ದು, ಭೂಮಿ ಇದೆಯೆಂದು ಕೃಷಿಕನನ್ನೇ ವಿವಾಹವಾದ ಉದಾಹರಣೆಗಳೂ ನಮ್ಮ ನಡುವೆ ಇವೆ.

ಕೃಪೆ : ಉದಯವಾಣಿ 31-10-2018

3 comments: